ಚಿವ್ - ಲಿಲ್ಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಬಹುವಾರ್ಷಿಕ ಲಶುನ ಸಸ್ಯ. ಅಲಿಯಮ್ ಷೀನೋಪ್ರೇಸಮ್ ಇದರ ವೈಜ್ಞಾನಿಕ ಹೆಸರು. ಇದರ ಎಲೆ ಮತ್ತು ಗೆಡ್ಡೆಯನ್ನು ತರಕಾರಿ ಹಾಗೂ ಸಂಬಾರ ಪದಾರ್ಥವಾಗಿ ಉಪಯೋಗಿಸುತ್ತಾರೆ. ಇದು ಸುಂದರವಾದ ಸಸ್ಯವೂ ಆದ್ದರಿಂದ ಇದನ್ನು ಅಲಂಕಾರ ಸಸ್ಯವಾಗಿ ಬೆಳೆಸುವುದುಂಟು. ಚಿವ್ ಔಷಧಿಯ ಪ್ರಾಮುಖ್ಯವನ್ನು ಸಹ ಪಡೆದಿದೆ. ಇದರ ತವರು ಯೂರೋಪ್. ಇದು ನೋಡಲು ಹುಲ್ಲಿನಂತಿದೆ. ಇದರ ಎತ್ರ 6"-8". ಕಾಂಡ ಬಿಲ್ಬ್ ಮಾದರಿಯ ಗೆಡ್ಡೆಯಾಗಿ ಮಾರ್ಪಟ್ಟಿವೆ. ಎಲೆಗಳು ಉದ್ದನೆಯ ಹುಲ್ಲಿನ ಎಸಳುಗಳಂತಿವೆ. ಹೂಗಳು ತಿಳಿ ಕೆನ್ನೀಲಿ ಬಣ್ಣದವು ; ಚಿಕ್ಕ ಗಾತ್ರದವು ಗುಂಡನೆಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಚಿವ್ ಗಿಡವನ್ನು ಬೀಜಗಳಿಂದಲೂ ಕಿರುಲಶುನಗಳಿಂದಲೂ ವೃದ್ಧಿ ಮಾಡಬಹುದು. ಬೀಜ ಬಿತ್ತುವ ಕಾಲ ಏಪ್ರಿಲ್. ಕಿರಲಶುನಗಳನ್ನು ನೆಟ್ಟು ಬೆಳೆಸುವಾಗ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಸಾಲಿನಿಂದ ಸಾಲಿಗೆ 12" ಮತ್ತು ಸಾಲಿನಲ್ಲಿ ಸಸಿಯಿಂದ ಸಸಿಗೆ 6" ಅಂತರ ಕೊಟ್ಟು ಬೆಳೆಸಲಾಗುತ್ತದೆ.
(ಬಿ.ಎ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ